ದೆಹಲಿಯ ಮೆಟ್ರೋ ನಿಲ್ದಾಣವೊಂದರಲ್ಲಿ ನಡೆದ ಅಸಹ್ಯಕರ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ನಾಗರಿಕ ಪ್ರಜ್ಞೆ ಇಲ್ಲದಂತೆ ವ್ಯಕ್ತಿಯೊಬ್ಬ ವರ್ತಿಸಿದ್ದ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಂದು ನಾವು ಎಷ್ಟೇ ಶಿಕ್ಷಣ ಪಡೆದ ಸಮಾಜ ಎಂದು ಹೇಳಿಕೊಂಡರೂ, ಸಾರ್ವಜನಿಕ ಶಿಸ್ತು ಮತ್ತು ಸ್ವಚ್ಛತೆಯ ವಿಚಾರ ಬಂದಾಗ ಬಹುತೇಕರ ನಡೆ ನಿರಾಶೆ ಉಂಟುಮಾಡುವಂತಿದೆ. ಪಾನ್ ಮಸಾಲ ಉಗುರುವುದು, ಕಸ ಎಸೆಯುವುದು, ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವುದು ದಿನನಿತ್ಯದ ದೃಶ್ಯವಾಗಿಬಿಟ್ಟಿದೆ. ಕಠಿಣ ಕಾನೂನುಗಳಿದ್ದರೂ ಸಹ ಕೆಲವರ ಮನಸ್ಥಿತಿ ಬದಲಾಗುತ್ತಿಲ್ಲ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ.
ವೈರಲ್ ಆಗಿರುವ ವೀಡಿಯೋದಲ್ಲಿ, ದೆಹಲಿಯ ನರೈನಾ ವಿಹಾರ್ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ವ್ಯಕ್ತಿಯೊಬ್ಬ ನೆಲದ ಮೇಲೆಯೇ ಪ್ಯಾಂಟ್ ಬಿಚ್ಚಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವೇಳೆ ಮೆಟ್ರೋ ಕಾರ್ಯನಿರ್ವಹಿಸುತ್ತಿದ್ದ ಸಮಯವಾಗಿದ್ದು, ಪ್ರಯಾಣಿಕರೂ ಅಲ್ಲಿಯೇ ಇದ್ದರು ಎನ್ನಲಾಗಿದೆ.
ಆದರೆ ಅಚಾನಕ್ ಯಾರೋ ತನ್ನನ್ನು ವೀಡಿಯೋ ಮಾಡುತ್ತಿದ್ದಾರೆ ಎಂಬುದು ಆತನ ಗಮನಕ್ಕೆ ಬಂದ ಕೂಡಲೇ, ಆತ ಪಕ್ಕಕ್ಕೆ ತಿರುಗಿ ಅಲ್ಲಿಂದ ತಕ್ಷಣವೇ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಸಾರ್ವಜನಿಕರಿಂದ ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಶುರುವಾಗಿದೆ.
ಈ ವೀಡಿಯೋವನ್ನು ತರುಣ್ ಗೌತಮ್ ಎಂಬವರು ಎಕ್ಸ್ (Twitter)ನಲ್ಲಿ ಹಂಚಿಕೊಂಡಿದ್ದು, “ಮೆಟ್ರೋ ನಿಲ್ದಾಣಗಳು ಸ್ವಚ್ಛತೆ ಮತ್ತು ಮಹಿಳಾ ಸುರಕ್ಷತೆಗೆ ಹೆಸರಾಗಿವೆ. ಅಂಥ ಸ್ಥಳದಲ್ಲೇ ಈ ರೀತಿಯ ವರ್ತನೆ ಅಕ್ಷಮ್ಯ. ಈತ ಮದ್ಯಪಾನ ಮಾಡಿಕೊಂಡಿರುವಂತೆ ಕಾಣಿಸುತ್ತಾನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.