-
- ಬೆಂಗಳೂರು: ನಗರದಲ್ಲಿ ಆತಂಕ ಮೂಡಿಸಿದ್ದ ಮಹಿಳೆಯರ ಒಳಉಡುಪು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 23 ವರ್ಷದ ಕೇರಳ ಮೂಲದ ಯುವಕನನ್ನು ಬಂಧಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
.
ಬಂಧಿತ ಆರೋಪಿಯನ್ನು ಅಮಲ್ (23) ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಬಳಿ ಮಹಿಳೆಯರ ಮನೆಗಳ ಹೊರಗೆ ಒಣಗಿಸಲು ಹಾಕಿದ್ದ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿದ್ದನು. ಕದ್ದ ಒಳಉಡುಪುಗಳನ್ನು ಅಮಲ್ ತಾನೇ ಧರಿಸುತ್ತಿದ್ದನು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಪಿಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಪರಿಶೀಲನೆ ವೇಳೆ ಮಹಿಳೆಯರ ಒಳಉಡುಪುಗಳ ಹಲವು ಫೋಟೋಗಳು ಪತ್ತೆಯಾಗಿದ್ದು, ಇದನ್ನು ಕಂಡು ಪೊಲೀಸರು ಕೂಡ ಕೆಲ ಕ್ಷಣ ಶಾಕ್ ಆಗಿದ್ದಾರೆ.
ಇದಲ್ಲದೆ, ಅಮಲ್ ವಾಸವಾಗಿದ್ದ ಮನೆಯಲ್ಲಿ ಕೂಡ ಮಹಿಳೆಯರ ಹಲವು ಒಳಉಡುಪುಗಳು ಪತ್ತೆಯಾಗಿವೆ. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಕೃತ್ಯದಲ್ಲಿ ಇನ್ನೇನಾದರೂ ಸಂಬಂಧವಿದೆಯೇ ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.