ವಿಧಾನಸಭೆಯಲ್ಲಿ ಅನ್ನಭಾಗ್ಯ ಸದ್ದು: ಜನವರಿಗೆ ₹657 ಕೋಟಿ ಪಾವತಿ ಬಾಕಿ ಎಂದು ಸರ್ಕಾರ ಒಪ್ಪಿಕೆ
ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆಯ ಬಾಕಿ ಹಣದ ನಂತರ ಇದೀಗ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಹಣ ಪಾವತಿ ಬಾಕಿ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದ 1.27 ಕೋಟಿ ಪಡಿತರದಾರರಿಗೆ ಒಂದು ತಿಂಗಳ ₹657 ಕೋಟಿ ಹಣ ಇನ್ನೂ ಜಮೆ ಆಗಿಲ್ಲ ಎಂಬ ಆರೋಪ ಸದನದಲ್ಲಿ ಕೇಳಿಬಂದಿದೆ.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ, 2025ರ ಜನವರಿ ತಿಂಗಳಲ್ಲಿ ಅನ್ನಭಾಗ್ಯ ಫಲಾನುಭವಿಗಳಿಗೆ ಹಣ ಜಮೆ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಒಂದು ವರ್ಷವಾದರೂ ಹಣ ಪಾವತಿ ಆಗದೆ ಉಳಿದಿರುವುದಾಗಿ ಅವರು ಸದನದ ಗಮನ ಸೆಳೆದರು.
READ THIS = ‘ಗಾಯವಂತೆ… ಆದರೆ ಓಡಾಟ ನೋಡಿ!’ – ಇಶಾನ್ ಕಿಶನ್ ಆಡದಿದ್ದಕ್ಕೆ ಗಂಭೀರ್ ಮೇಲೆ ಅನುಮಾನ |
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಅನ್ನಭಾಗ್ಯ ಯೋಜನೆ ಆರಂಭದ ಸಮಯದಲ್ಲಿ ಕೇಂದ್ರ ಸರ್ಕಾರದ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾದ ಕಾರಣ ಐದು ಕೆಜಿ ಅಕ್ಕಿಯ ಬದಲಿಗೆ ₹170 ಡಿಬಿಟಿ ಮೂಲಕ ಹಣ ನೀಡಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದರು.
2023 ಜುಲೈಯಿಂದ 2024-25ರ ವರೆಗೆ ಹಣ ಪಾವತಿ ಮಾಡಲಾಗಿದೆ, ನಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಸಚಿವರು ಸಮರ್ಥಿಸಿಕೊಂಡರು.
ಆದರೆ, ಮಹೇಶ್ ಟೆಂಗಿನಕಾಯಿ ಮತ್ತಷ್ಟು ಕೆದಕಿ, 2025ರ ಫೆಬ್ರವರಿಯಿಂದ ಅಕ್ಕಿ ನೀಡಲು ಆರಂಭಿಸಿದ್ದೀರಿ. ಆದರೆ ಜನವರಿ ತಿಂಗಳಲ್ಲಿ ಹಣ ಕೊಡಬೇಕಿತ್ತು. ₹657 ಕೋಟಿ ಕೊಡಲೇಬೇಕಿತ್ತು, ಆದರೆ ಕೊಟ್ಟಿಲ್ಲ ಎಂದು ಆರೋಪಿಸಿದರು.
ಜನವರಿಯ ಬಾಕಿ ಹಣ ಕೊಡ್ತೀರಾ ಅಥವಾ ಅಕ್ಕಿ ಕೊಡ್ತೀರಾ ಎಂದು ಪ್ರಶ್ನಿಸಿದಾಗ, ಸಚಿವ ಮುನಿಯಪ್ಪ ಜನವರಿಗೆ ಹಣ ಕೊಡಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಸಕಾಲಕ್ಕೆ ಅಕ್ಕಿ ನೀಡದ ಕಾರಣ ಹಣವೂ, ಅಕ್ಕಿಯೂ ಕೊಡಲಾಗಿಲ್ಲ ಎಂದು ಒಪ್ಪಿಕೊಂಡರು.
ಇದರಿಂದಾಗಿ 2025ರ ಜನವರಿ ತಿಂಗಳಲ್ಲಿ ಫಲಾನುಭವಿಗಳಿಗೆ ಹಣವೂ ಇಲ್ಲ, ಅಕ್ಕಿಯೂ ಇಲ್ಲ ಎಂಬ ವಿಚಾರ ವಿಧಾನಸಭೆಯಲ್ಲಿ ಅಧಿಕೃತವಾಗಿ ದಾಖಲಾಗಿದೆ.