ಸಿಸಿಎಲ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕಿಚ್ಚಾ ಸುದೀಪ್, ಇತ್ತೀಚಿನ ಪಂದ್ಯದಲ್ಲಿ ಅವಾಚ್ಯ ಶಬ್ದ ಬಳಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಹಲವು ಟೀಕೆಗಳು ಕೂಡ ಕೇಳಿಬಂದಿದ್ದವು.
ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪೂರದೊಳ್’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ಈ ವಿವಾದದ ಹಿಂದಿನ ಕಥೆಯನ್ನು ಬಹಿರಂಗಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರ್ದೇಶಕ ಜೋಗಿ ಪ್ರೇಮ್ ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದರು.
ಜೋಗಿ ಪ್ರೇಮ್ ಮಾತನಾಡುತ್ತಾ, “ಹಿಂದೆ ನಾನು ಮಾತನಾಡುವಾಗ ಯಾವಾದರೂ ಕೆಟ್ಟ ಪದ ಬಳಕೆ ಮಾಡಿದರೆ, ಸುದೀಪ್ ತಕ್ಷಣ ಪ್ರಶ್ನೆ ಮಾಡುತ್ತಿದ್ದರು. ಹಾಗೆಲ್ಲಾ ಏಕೆ ಮಾತನಾಡುತ್ತೀಯಾ ಅಂತ ಹೇಳ್ತಿದ್ರು. ಆದರೆ ಈಗ ಸುದೀಪ್ ಅವರೇ ಅದೇ ಶಬ್ದ ಬಳಕೆ ಮಾಡಿದ್ದು ಕೇಳಿ ಖುಷಿಯಾಯಿತು” ಎಂದು ಹಾಸ್ಯವಾಗಿ ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ಸುದೀಪ್,
“ಮೊನ್ನೆ ವೈರಲ್ ಆದ ರೀಲ್ಗೆ ಕಾರಣ ಗುರುಗಳು ಜೋಗಿ ಪ್ರೇಮ್. ಮುಂದೆ ಸೆಮಿಫೈನಲ್ನಲ್ಲಿ ಏನಾದರೂ ಆಯ್ತು ಅಂದ್ರೆ, ಅದಕ್ಕೂ ಪ್ರೇಮ್ ಅವರೇ ಕಾರಣ” ಎಂದು ನಗೆಚಟಾಕಿ ಶೈಲಿಯಲ್ಲಿ ಕಾಲೆಳೆದರು.
ಸುದೀಪ್ ಅವರ ಈ ಸ್ಪಷ್ಟನೆ ಮತ್ತು ಪ್ರೇಮ್ ಜೊತೆಗಿನ ಹಾಸ್ಯಭರಿತ ಸಂಭಾಷಣೆ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.