WhatsApp Join My WhatsApp

ಮೊಬೈಲ್ ಮಕ್ಕಳ ಭವಿಷ್ಯ ಹಾಳು ಮಾಡ್ತಿದೆಯಾ? ಪೋಷಕರು ತಪ್ಪದೆ ಓದಲೇಬೇಕಾದ ಸತ್ಯ

ಮೊಬೈಲ್‌ನಿಂದ ಮಕ್ಕಳನ್ನು, ಮಕ್ಕಳಿಂದ ಮೊಬೈಲ್ ಅನ್ನು ದೂರ ಇಡುವುದು ಇಂದಿನ ಅಗತ್ಯವಾಗಿದೆ.

43

ಊಹೆಗೂ ಮೀರಿದ ವೇಗದಲ್ಲಿ ಓಡುತ್ತಿರುವ ಈ ಆಧುನಿಕ ಪ್ರಪಂಚದಲ್ಲಿ, ಮೊಬೈಲ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅದರ ಉಪಯೋಗ ಎಷ್ಟೋ ಇದ್ದರೂ, ಅದರ ಜೊತೆಗೆ ಕೆಲವೊಂದು ಅನಾನುಕೂಲತೆಗಳು ಮೌನವಾಗಿ ನಮ್ಮ ಬದುಕಿನೊಳಗೆ ನುಗ್ಗುತ್ತಿವೆ ಎಂಬ ಸತ್ಯವನ್ನು ನಾವು ಅರಿಯಬೇಕು.

ವಿಶೇಷವಾಗಿ, ಪೋಷಕರ ದಿನನಿತ್ಯದ ಅಭ್ಯಾಸಗಳೇ ಅರಿಯದೆ ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಇಂದು ಯಾವುದೇ ಮನೆಯೊಳಗೆ ಹೋಗಿ ನೋಡಿದರೂ, ಮಕ್ಕಳು ಮೊಬೈಲ್ ಪರದೆಯಲ್ಲೇ ಮುಳುಗಿ ಹೋಗಿರುವುದು ಸಾಮಾನ್ಯ ದೃಶ್ಯವಾಗಿದೆ.

ಹಬ್ಬ–ಹರಿದಿನಗಳ ಊಟದ ಸಮಯವಾಗಲಿ, ಮನೆಯ ದಿನನಿತ್ಯದ ಊಟವಾಗಲಿ – ಚಿಕ್ಕ ಮಕ್ಕಳು ಮೊಬೈಲ್ ಕೈಯಲ್ಲಿದ್ದರೆ ಮಾತ್ರ ಸುಮ್ಮನೆ ಊಟ ಮಾಡುತ್ತಾರೆ. ಮೊಬೈಲ್ ಕೊಡದೇ ಹೋದರೆ ಊಟವೇ ಆಗದ ಸ್ಥಿತಿ. ಈ ಬಗ್ಗೆ ಪೋಷಕರನ್ನು ಪ್ರಶ್ನಿಸಿದರೆ,
“ಏನು ಮಾಡೋದು? ಈಗಿನ ಮಕ್ಕಳು ತುಂಬಾ ಹಠ ಮಾಡ್ತಾರೆ, ಅದಕ್ಕೆ ಸುಮ್ಮನೆ ಆಗ್ಲಿ ಅಂತ ಕೊಡ್ತೀವಿ” ಎಂಬ ಉತ್ತರ ಸಾಮಾನ್ಯ.

2

ಆದರೆ ಇದೇ ಮೊದಲ ದೊಡ್ಡ ತಪ್ಪು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ಹಿರಿಯರ ನಾಣ್ಣುಡಿ ಇಲ್ಲಿ ನೆನಪಾಗುತ್ತದೆ. ನಮ್ಮನ್ನೆಲ್ಲಾ ನಮ್ಮ ಪೋಷಕರು ಬೈದು, ತಿದ್ದಿ, ಬುದ್ಧಿ ಹೇಳಿ ಬೆಳೆಸಿದದ್ದರಿಂದಲೇ ಇಂದು ನಾವು ಈ ಹಂತಕ್ಕೆ ಬಂದಿದ್ದೇವೆ.

ಮಕ್ಕಳಿಗೆ ಹೆಚ್ಚಾಗಿ ಬುದ್ಧಿ ಹೇಳುವ ಬದಲು, ಅವರ ದಿನನಿತ್ಯದ ಅಭ್ಯಾಸಗಳನ್ನೇ ನಿಧಾನವಾಗಿ ಬದಲಿಸಬೇಕು. ಮೊಬೈಲ್ ಬದಲು ಮಕ್ಕಳ ಕೈಗೆ ಡ್ರಾಯಿಂಗ್ ಪುಸ್ತಕಗಳು, ಬಣ್ಣದ ಪೆನ್ಸಿಲ್ಗಳು, ಪೇಂಟಿಂಗ್‌ಗಳು, ಕಥಾ ಪುಸ್ತಕಗಳನ್ನು ನೀಡಬೇಕು. ಅವುಗಳಲ್ಲಿ ಗಮನಹರಿಸುವಂತೆ ಪ್ರೋತ್ಸಾಹಿಸಬೇಕು.

ಸಾಧ್ಯವಾದರೆ ಮನೆಯಲ್ಲೊಂದು ಚಿಕ್ಕ ನಾಯಿ ಅಥವಾ ಬೆಕ್ಕನ್ನು ಸಾಕುವುದು, ಚಿಕ್ಕ ಅಕ್ವೇರಿಯಂ ಅಥವಾ ಬೌಲ್‌ನಲ್ಲಿ ಮೀನುಗಳನ್ನು ಇಡುವುದು ಮಕ್ಕಳಿಗೆ ಅಪಾರ ಸಂತೋಷ ನೀಡುತ್ತದೆ. ಮನೆಯ ಮುಂದೆ ಸ್ವಲ್ಪ ಜಾಗವಿದ್ದರೂ, ಪಾಟ್ಗಳಲ್ಲಿ ಸಣ್ಣ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡುವುದು ಅವರಲ್ಲಿ ಜೀವನಮೌಲ್ಯಗಳನ್ನು ಬೆಳೆಸುತ್ತದೆ.

ನಿಮ್ಮ ಮಕ್ಕಳು ಇತರರಿಗೆ ಮಾದರಿಯಾಗಲಿ. ಅವರ ಭವಿಷ್ಯ ಉಜ್ವಲವಾಗಿರಲಿ. ಪೋಷಕರಾದ ನಿಮ್ಮ ಮನಸ್ಸು ನೆಮ್ಮದಿಯಿಂದ ತುಂಬಿರಲಿ.

Leave a Comment